Home » NSS Coordinator Office
NSS Coordinator Office
ನಮ್ಮ - BCU
ಬೆಂಗಳೂರು ನಗರ ವಿಶ್ವವಿದ್ಯಾನಿಲಯ - Bengaluru City University
ರಾಷ್ಟ್ರೀಯ ಸೇವಾ ಯೋಜನೆ - National Service Scheme (NSS)
ಬೆಂಗಳೂರು ವಿಶ್ವವಿದ್ಯಾಲಯ ಭಾರತದ ಅತಿದೊಡ್ಡ ವಿಶ್ವವಿದ್ಯಾಯಲಗಳಲ್ಲಿ ಒಂದಾಗಿತ್ತು. ಇದು ೨೪.೧೧.೧೯೬೪ ರಲ್ಲಿ ಬೆಂಗಳೂರಿನಲ್ಲಿ ಸ್ಥಾಪನೆಗೊಂಡಿತು. ಇದರ ಮೊದಲ ಕುಲಪತಿಗಳಾಗಿ ಮಾನ್ಯ ಲರೋಯಾ ಅವರು ಆಯ್ಕೆಗೊಂಡರು. ಅದುವರೆಗೂ ಮೈಸೂರು ವಿಶ್ವವಿದ್ಯಾಲಯಕ್ಕೆ ಸೇರಿದ್ದ ೩೨ ಕಾಲೇಜುಗಳು ಇದರ ವ್ಯಾಪ್ತಿಗೆ ವರ್ಗಾವಣೆಗೊಂಡಿತು. ೧೮೫೮ ರಲ್ಲಿ ಆರಂಭವಾಗಿದ್ದ ಸೆಂಟ್ರಲ್ ಕಾಲೇಜು ಮತ್ತು ೧೯೧೭ ರಲ್ಲಿ ಆರಂಭಗೊOಡಿದ್ದ ಎಂಜಿನಿಯರಿಂಗ್ ಕಾಲೇಜು ಇದರ ಆಂಗಿಕ ಕಾಲೇಜುಗಳಾದವು. ೧೯೭೬ ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ನಗರಕ್ಕಷ್ಟೇ ಸೀಮಿತವಾಗಿದ್ದನ್ನು ಅವಿಭಜಿತ ಬೆಂಗಳೂರು, ಕೋಲಾರ, ತುಮಕೂರು ಜಿಲ್ಲೆಗಳಿಗೆ ವಿಸ್ತರಿಸಿಕೊಂಡಿತು. ಸೆಂಟ್ರಲ್ ಕಾಲೇಜು ಆವರಣದಲ್ಲಿ ಬೆಳೆದು ನಿಂತ ಬೆಂಗಳೂರು ವಿಶ್ವವಿದ್ಯಾಲಯ ಅದರ ಬಾಹುಳ್ಯದಿಂದಾಗಿ ವಿಶಾಲ ಆವರಣವನ್ನು ಕಂಡುಕೊಳ್ಳುವುದು ಅನಿವಾರ್ಯವಾಗಿತ್ತು. ಅದರ ಪರಿಣಾಮ ಅಂದಿನ ಕುಲಪತಿಗಳಾಗಿದ್ದ ಡಾ. ಎಚ್. ನರಸಿಂಹಯ್ಯನವರು ನಾಗರಭಾವಿ ಸಮೀಪ ೧೪೦೦ ಎಕರೆ ಭೂಪ್ರದೇಶವನ್ನು ಸರ್ಕಾರಕ್ಕೆ ಸೂಚಿಸಿ ಅನುಮತಿಯನ್ನು ಪಡೆದು ಜ್ಞಾನಭಾರತಿ ಎಂಬ ಹೆಸರಿನಲ್ಲಿ ೧೯೭೩ ರಲ್ಲಿ ತಲೆಎತ್ತಿತು. ಬೆಂಗಳೂರು ವಿಶ್ವವಿದ್ಯಾಲಯದ ಬೋಧನೆ ಹಾಗೂ ಸಂಶೋಧನೆಗಳು ಜಗತ್ತಿನ ಅನೇಕ ರಾಷ್ಟಗಳೊಂದಿಗಿನ ಸಂಬOಧವನ್ನು ನಿಕಟಗೊಳಿಸಿವೆ.ಕ್ರಮೇಣ ಇದರ ವ್ಯಾಪ್ತಿಯಲ್ಲಿ ೭೨೦ ಕಾಲೇಜುಗಳನ್ನೊಳಗೊಂಡಿತು. ಇದರಿಂದ ಆಗುತ್ತಿದ್ದ ಒತ್ತಡವನ್ನು ಕಡಿಮೆ ಮಾಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಪ್ರಮಾಣ ಮತ್ತು ಗುಣಮಟ್ಟಗಳೆರಡನ್ನು ಗಮನಿಸಿ ತ್ರಿಭಜನೆ ಮಾಡಲು ಸಚಿವಸಂಪುಟದಲ್ಲಿ ತೀರ್ಮಾನವನ್ನು ತೆಗೆದುಕೊಂಡಿತು. ಅದರಂತೆ ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯಗಳಾಗಿ ತ್ರಿಭಜನೆಗೊಂಡಿತು.
ಬೆಂಗಳೂರಿನ ಹೃದಯಭಾಗದಲ್ಲಿರುವ ಸೆಂಟ್ರಲ್ ಕಾಲೇಜು ೪೩ ಎಕರೆ ವಿಸ್ತೀರ್ಣದ ಕ್ಯಾಂಪಸ್ನಲ್ಲಿ ಅಮೂಲ್ಯ ವಾಸ್ತುಶಿಲ್ಪ ಪರಂಪರೆಯನ್ನು ಹೊಂದಿದೆ. ಈ ಆವರಣದಲ್ಲಿರುವ ಕಟ್ಟಡಗಳಿಗೆ ೧೬೨ ವರ್ಷಗಳ ಇತಿಹಾಸವಿದೆ. ಇವು ಪಾರಂಪರಿಕ ಕಟ್ಟಡಗಳಾಗಿವೆ. ಇಂತಹ ಸೆಂಟ್ರಲ್ ಕಾಲೇಜಿನ ೧೬೦ನೇ ವಾರ್ಷಿಕೋತ್ಸವ ಸುಸಂದರ್ಭದಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ೭ ಮಾರ್ಚ್ ೨೦೧೮ ರಲ್ಲಿ ಅಸ್ಥಿತ್ವಕ್ಕೆ ಬಂದಿತು. ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಮಾನ್ಯ ಶ್ರೀ ಸಿದ್ಧರಾಮಯ್ಯನವರ ಅಮೃತಹಸ್ತದಿಂದ ಉದ್ಘಾಟನೆಗೊಂಡಿತು. ಓ ನನ್ನ ಚೇತನ ಆಗು ನೀ ಅನಿಕೇತನ’ಗೀತೆಯಲ್ಲಿನ ವಿಶ್ವಮಾನವತೆಯ ಉದ್ದೇಶ ಹಾಗೂ ಜ್ಞಾನದ ಸೃಷ್ಟಿ, ಪ್ರಸರಣ, ಮತ್ತು ಅನ್ವಯಿಸುವಿಕೆಗೆ ಸರಿಯಾದ ಪರಿಸರವನ್ನು ಕಲ್ಪಿಸುವ ಧ್ಯೇಯದೊಂದಿಗೆ ಸ್ಥಾಪನೆಗೊಂಡಿದೆ. ಇದರ ಪ್ರಥಮ ಕುಲಪತಿಗಳಾಗಿ ಮಾನ್ಯ ಪ್ರೊ. ಎಸ್. ಜಾಫೆಟ್ ನೇಮಕಗೊಂಡರು. ಇವರು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯವನ್ನು ಜಾಗತಿಕ ಮಟ್ಟದ ವಿಶ್ವವಿದ್ಯಾಲಯವನ್ನಾಗಿ ರೂಪಿಸಬೇಕೆಂದು ಕನಸು ಕಟ್ಟಿಕೊಂಡು ಶ್ರಮಿಸುತ್ತಿದ್ದಾರೆ. ಹಲವು ಸ್ನಾತಕೋತ್ತರ ಪದವಿಗಳೊಂದಿಗೆ ಬೆಂಗಳೂರು ನಗರದ ೧೩ ವಿಧಾನಸಭಾ ಕೇತ್ರಗಳ ವ್ಯಾಪ್ತಿಯಲ್ಲಿ ಬರುವ ಒಟ್ಟು ೨೨೭ ಪದವಿ, ಬಿ.ಇಡಿ, ಮತ್ತು ಬಿ.ಪಿ.ಇಡಿ ಪದವಿ ಕಾಲೇಜುಗಳನ್ನೊಳಗೊಂಡಿದೆ. ಸುಮಾರು ೬೦ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶೈಕ್ಷಣಿಕ ಧೇಯೋದ್ದೇಶಗಳಿಗಾಗಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು, ಕುಲಸಚಿವರುಗಳು ಜನವರಿ ೨೦೧೯ ರಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೋಶಕ್ಕೆ ಚಾಲನೆ ನೀಡಿದರು. ಈ ಕೋಶದ ಮುಖ್ಯ ಉದ್ಧೇಶ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ಧಿಗೊಳಿಸುವುದು, ರಾಷ್ಟನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡOತಹ ಅನುಭವವನ್ನು ನೀಡುವುದಾಗಿದೆ. ಇದರೊಂದಿಗೆ ರಾಷ್ಟಪ್ರೇಮ ಮತ್ತು ಸೇವಾ ಮನೋಭಾವನೆಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಇದರ ಸಂಪೂರ್ಣ ಹೊಣೆಗಾರಿಕೆಯನ್ನು ಎನ್.ಎಸ್.ಎಸ್.ಕಾರ್ಯಕ್ರಮಾಧಿಕಾರಿಯಾಗಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಎಚ್.ಜಿ.ಗೋವಿಂದಗೌಡರನ್ನು ಮಾನ್ಯ ಕುಲಪತಿಗಳು, ಕುಲಸಚಿವರುಗಳು ಗುರುತಿಸಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಎನ್ ಎಸ್ ಎಸ್ ಸಂಯೋಜನಾಧಿಕಾರಿಗಳನ್ನಾಗಿ ನೇಮಕ ಮಾಡಲಾಯಿತು. ಇವರು ಅಧಿಕಾರವಹಿಸಿಕೊಂಡOದಿನಿOದ ರಾಷ್ಟ, ರಾಜ್ಯ, ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಮಟ್ಟದಲ್ಲಿ ಸರ್ಕಾರ, ಸಂಘ ಸಂಸ್ಥೆಗಳ ಹಾಗೂ ಕಾರ್ಯಕ್ರಮಾಧಿಕಾರಿಗಳ ನೆರವಿನೊಂದಿಗೆ ಹಲವಾರು ಮೌಲಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅದರಲ್ಲಿ ಏರೋ ಇಂಡಿಯಾ ೨೦೧೯ ಬೆಂಗಳೂರಿನ ವಾಯುನೆಲದಲ್ಲಿ ೧೧ ದಿನಗಳ ಕಾಲ ನಡೆಯಿತು. ಈ ಸಂದರ್ಭದಲ್ಲಿ ಸುಮಾರು ೩೦೦ ಎನ್.ಎಸ್.ಎಸ್.ಸ್ವಯಂಸೇವಕರು ಪಾಲ್ಗೊಂಡು, ಅಲ್ಲಿಯ ಶಿಸ್ತು ನಿರ್ವಹಣೆಯಲ್ಲಿ ಅಧಿಕಾರಿಗಳಿಗೆ ಸಹಕಾರವನ್ನು ನೀಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದರು. ೨೦೧೯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಮ್ಮ ಎನ್.ಎಸ್.ಎಸ್.ಸ್ವಯಂಸೇವಕರು ನಿರ್ವಹಿಸಿದ ಪಾತ್ರ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ. ರಾಜ್ಯ ಚುನಾವಣಾ ಆಯೋಗ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನೆರವಿನೊಂದಿಗೆ ೭.೩.೨೦೧೯ ರಂದು ಜ್ಞಾನಜೋತಿ ಸಭಾಂಗಣದಲ್ಲಿ ಬೃಹತ್ ಪ್ರಮಾಣದಲ್ಲಿ ಮತದಾನ ಜಾಗೃತಿ ಸಮಾವೇಶ, ಮತ್ತು ಜಾಥವನ್ನು ಹಮ್ಮಿಕೊಳ್ಳಲಾಗಿತ್ತು. ಬೇರೆ ಬೇರೆ ಕಾಲೇಜುಗಳಿಂದ ಸುಮಾರು ೩೦೦೦ ಎನ್.ಎಸ್.ಎಸ್.ಸ್ವಯಂಸೇವಕರು, ಕಾರ್ಯಕ್ರಮಾಧಿಕಾರಿಗಳು ಭಾಗವಹಿಸಿದ್ದರು. ಸಮಾವೇಶವನ್ನು ರಾಜ್ಯ ಚುಣಾವಣೆ ಆಯೋಗದ ಕಮೀಷನರ್ ಉದ್ಘಾಟಿಸಿ ಮತದಾನದ ಮಹತ್ವವನ್ನು ಕುರಿತು ತಿಳಿಸಿಕೊಟ್ಟರು. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ಜಾಪೆಟ್ ಸಮಾವೇಶದ ಅಧ್ಯಕ್ಷತೆ ವಹಿಸಿ ಇಷ್ಟೊಂದು ವಿದ್ಯಾರ್ಥಿಗಳ ಸಮಾವೇಶವನ್ನು ಕಂಡು ಆನಂದಿಸಿದರು. ನಂತರ ಮತದಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಸ್ವಯಂಸೇವಕರುಗಳು ಮತಗಟ್ಟೆ ಕೇಂದ್ರಗಳಲ್ಲಿ ಸಿಪಾಯಿಗಳಂತೆ ಕಾರ್ಯನಿರ್ವಹಿಸಿದರು. ಮತಗಟ್ಟೆ ಕೇಂದ್ರಗಳಿಗೆ ಬಂದ ಅಂಗವಿಕಲರಿಗೆ ,ವೃದ್ಧರಿಗೆ ವ್ಹೀಲ್ ಚೇರ್ ವ್ಯವಸ್ಥೆಯನ್ನು ಕಲ್ಪಿಸಿ ಸುಲಭ ರೀತಿಯಲ್ಲಿ ಮತದಾನ ಮಾಡಲು ಸಹಕಾರವನ್ನಿತ್ತರು. ರಾಷ್ಟ, ರಾಜ್ಯ ಮಟ್ಟದಲ್ಲಿ ನಡೆದ ಹಲವಾರು ರಾಷ್ಟ್ರೀಯ ಭಾವೈಕ್ಯತಾ ಕಾರ್ಯಕ್ರಮಗಳಲ್ಲಿ ೫೦ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಹಲವು ಬಹುಮಾನಗಳನ್ನು ಗಳಿಸಿ ತಂದು ವಿಶ್ವವಿದ್ಯಾಲಯದ ಘನತೆ ಹಾಗೂ ಗೌರವವನ್ನು ಇಮ್ಮಡಿಗೊಳಿಸಿದ್ದಾರೆ. ಉತ್ತರಪ್ರದೇಶದ ರಾಜಧಾನಿ ಲಕ್ನೋದಲ್ಲಿ ನಡೆದ ಯುವಜನಮೇಳದಲ್ಲಿ ೨೫ ವಿದ್ಯಾರ್ಥಿಗಳು ನಮ್ಮ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಅಲ್ಲಿ ನಡೆದ ಹಲವಾರು ಸ್ವರ್ಧೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ಪಡೆದುಕೊಂಡು ವಿಜಯಶಾಲಿಗಳಾಗಿ ಬಂದರು. ಇಶಾ ಫೌಂಡೇಷನ್ನ ಜಗ್ಗಿವಾಸುದೇವ ಅವರ ನೇತೃತ್ವದಲ್ಲಿ ಕಾವೇರಿ ನೀರನ್ನು ಸಂರಕ್ಷಸಿಕೊಳ್ಳಲು ಜನಜಾಗೃತಿಮೂಡಿಸುವ ಕಾವೇರಿ ಕೂಗು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಎನ್.ಎಸ್.ಎಸ್.ಸ್ವಯಂಸೇವಕರು ತಮ್ಮ ತಮ್ಮ ಕಾಲೇಜು ವಲಯಗಳಲ್ಲಿ ಜಾಥ ಕೈಗೊಂಡು ಜನಜಾಗೃತಿ ಮೂಡಿಸಿದರು.ಅಲ್ಲದೆ ಅರಮನೆ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಸಾವಿರಾರು ಸ್ವಯಂಸೇವಕರು ಪಾಲ್ಗೊಂಡಿದ್ದರು. ಜೂನ್ ೨೧, ೨೦೧೯ರ ವಿಶ್ವ ಯೋಗ ದಿನಾಚರಣೆ ಅಂಗವಾಗಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ಯೋಗ ದಿನಾಚರಣೆಯಲ್ಲಿ ಸಾವಿರಾರು ಸ್ವಯಂಸೇವಕರುಗಳು ಭಾಗವಹಿಸಿದ್ದರು.ಪ್ರಕೃತಿ ವಿಕೋಪ ಸಂದರ್ಭದಲ್ಲಿ ನಮ್ಮ ಎನ್.ಎಸ್.ಎಸ್. ಸ್ವಯಂಸೇವಕರುಗಳು ಹಣ,ದವಸ ,ಧಾನ್ಯ, ಬಟ್ಟೆ ಹಾಗೂ ಅಗತ್ಯ ವಸ್ತಗಳನ್ನು ಸಂಗ್ರಹಿಸಿ ಸರ್ಕಾರದ ನೆರವಿಗೆ ಬಂದರು. ಖುದ್ದಾಗಿ ಸಂಕಷ್ಟಕ್ಕೆ ಒಳಗಾದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡಿದ ರೀತಿಯಂತು ಅವಿಸ್ಮರಣೀಯ. ಯುನಿಸೆಫ್ ಸಹಯೋಗದೊಂದಿಗೆ ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳ ಶ್ರೇಯೋಭಿವೃದ್ಧಿ ವಿಷಯಗಳ ಹಿನ್ನೆಲೆಯಲ್ಲಿ ಕಾರ್ಯಗಾರಗಳನ್ನು ನಡೆಸಲಾಯಿತು. ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬರುವ ಹತ್ತು ಕಾಲೇಜುಗಳಿಗೆ ವಿಶೇಷ ಅನುದಾನವನ್ನು ನೀಡಿ ಮಾದಕದ್ರವ್ಯದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬೆಂಗಳೂರಿನ ಗಾಂಧಿಭವನದೊOದಿಗೆ ಕೂಡಿ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಅದರಲ್ಲಿ ಸ್ವಚ್ಛಬೆಂಗಳೂರು ಕಾರ್ಯಕ್ರಮ ಬಹುದೊಡ್ಡ ಯಶಸ್ಸನ್ನು ಪಡೆಯಿತು. ಪ್ರತಿ ಕಾರ್ಯಕ್ರಮದ ಹಿಂದೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳು, ಕುಲಸಚಿವರುಗಳು, ಹಣಕಾಸು ಅಧಿಕಾರಿಗಳು, ಕಾಲೇಜುಗಳ ಪ್ರಾಂಶುಪಾಲರುಗಳು, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳು ಹಾಗೂ ಸ್ವಯಂಸೇವಕರುಗಳು ಬೆಂಬಲವಾಗಿ ನಿಂತು ಯಶಸ್ಸಿಗೆ ಶ್ರಮಿಸಿದ್ದಾರೆ.